ಎಲ್ಲರ ಮನೆಯ ದೇವರ ಕೋಣೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಇರುತ್ತದೆ. ಯಾವ ದೇವರ ಫೋಟೋ ಇಲ್ಲವೆಂದರೂ ಕೂಡ ಈ ಮೂರು ದೇವರ ಫೋಟೋ ಮಾತ್ರ ಇದ್ದೆಇರುತ್ತದೆ. ಆದರೆ ಯಾಕೆ ಎನ್ನುವ ವಿಷಯ ಎಲ್ಲರಿಗೂ ತಿಳಿದಿಲ್ಲ. ಅದಕ್ಕೆ ಕಾರಣ ಇಲ್ಲಿದೆ ನೋಡಿ.
ಯಾವಾಗಲೂ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಒಂದು ಇರಲೇಬೇಕು. ಮುಖ್ಯವಾಗಿ ಪೂರೈಸಬೇಕಾದ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಆವಶ್ಯಕವಾಗಿದೆ. ಹಾಗೆಯೇ ನಿರ್ವಿಘ್ನದಾಯಕವಾಗಿ ನಡೆಸುವ ಕೆಲಸಗಳಿಂದ ನಿರ್ವಿಘ್ನದಾಯಕವಾದ ನಿರಂತರವಾದ ಅರ್ಥ ವ್ಯವಸ್ಥೆ ಒಂದು ಸಂಪನ್ನತೆಗೆ ಸಾಗಬೇಕು. ಇದಕ್ಕೆ ಲಕ್ಷ್ಮೀ ಕಟಾಕ್ಷ ಬೇಕು. ಅದಕ್ಕಾಗಿ ಶ್ರೀ ಲಕ್ಷ್ಮೀ ಮನೆಯಲ್ಲಿ ಸ್ಥಿರಗೊಂಡಿರಬೇಕು. ಸ್ಥಿರಗೊಳ್ಳುವ ಆರ್ಥಿಕತೆ ಕೇವಲ ನಿರ್ವಿಘ್ನತೆಗಳು ಹಾಗೂ ಲಕ್ಷ್ಮೀ ಕಟಾಕ್ಷದಿಂದ ಒದಗಲಾರದು. ಒದಗಿದ ಆರ್ಥಿಕ ಸೌಲಭ್ಯ ಗಟ್ಟಿಯಾಗಿ ನೆಲೆಯೂರಲು ಉತ್ತಮ ಜ್ಞಾನ, ಚಾಣಾಕ್ಷತೆ ಪ್ರಬುದ್ಧತೆ ವ್ಯಾವಹಾರಿಕತೆಗಳ ಆವಶ್ಯಕತೆ ಇದ್ದೇ ಇದೆ. ಇಲ್ಲದಿದ್ದಲ್ಲಿ ಚಂಚಲೆಯಾದ ಲಕ್ಷ್ಮೀಯನ್ನು ದೋಚಿಕೊಂಡು ಹೋಗುವ ದುಷ್ಟರಿದ್ದಾರೆ. ಪ್ರಾಣಕ್ಕೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜ್ಞಾನವನ್ನು ಹೊಂದಬೇಕಾದರೆ ಸರಸ್ವತಿಯ ಕೃಪೆ ತುಂಬಾ ಆವಶ್ಯಕವಾಗಿದೆ.
ಹಾಗೇ ಗಣೇಶನ ಆರಾಧನೆಯಿಂದಾಗಿ ಈತನ ತಂದೆ ತಾಯಿಯರಾದ ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ. ಶ್ರೀ ಲಕ್ಷ್ಮೀಯ ಪ್ರಸನ್ನತೆ ಇದ್ದಲ್ಲಿ ವಿಷ್ಣುವಿನ ಆಶೀರ್ವಾದ ಕಟ್ಟಿಟ್ಟ ಬುತ್ತಿ. ಸರಸ್ವತಿಯೇ ಪ್ರಜಾಪಿತನಾದ ಬ್ರಹ್ಮನ ಪತ್ನಿಯಾಗಿರುವುದರಿಂದ ಶ್ರೀವಾಣಿಯ ಕೃಪೆಯಿಂದಾಗಿ ಬ್ರಹ್ಮನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ.