ಬೆಂಗಳೂರು: ಇಂದು ಗುರುವಾರವಾಗಿದ್ದು, ಭಗವಾನ್ ಮಹಾವಿಷ್ಣುವಿನ ಪೂಜೆಯನ್ನು ಮಾಡುವುದರಿಂದ ನಮ್ಮ ಜನ್ಮ ಜನ್ಮಾಂತರದ ಪಾಪ ತೊಳೆದುಕೊಳ್ಳಬಹುದು. ಅದರಲ್ಲೂ ಆಷಾಢ ಮಾಸದಲ್ಲಿ ವಿಷ್ಣುವಿನ ಪೂಜೆಗೆ ವಿಶೇಷ ಪ್ರಾಶಸ್ತ್ಯವಿದೆ.
ಗುರುವಾರ ಕೇವಲ ರಾಘವೇಂದ್ರ ಸ್ವಾಮಿ ಮತ್ತು ಸಾಯಿಗೆ ವಿಶೇಷವಾದ ದಿನ ಮಾತ್ರವಲ್ಲ. ಲಕ್ಷ್ಮೀ ಸಹಿತ ಮಹಾವಿಷ್ಣುವಿಗೂ ಇಂದು ವಿಶೇಷ ದಿನವಾಗಿದೆ. ಗುರುವಾರದಂದು ಮಹಾವಿಷ್ಣುವನ್ನು ಪೂಜೆ ಮಾಡಿದರೆ ಆತ ಬೇಗನೇ ಪ್ರಸನ್ನನಾಗಿ ಬೇಡಿದ ವರವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ.
ಗುರುವಾರದಂದು ಮುಂಜಾವಿನಲ್ಲಿ ಎದ್ದು ಸ್ನಾನ ಮಾಡಿ ಹಳದಿ ಬಟ್ಟೆಯನ್ನು ಧಾರಣೆ ಮಾಡಬೇಕು. ಬಳಿಕ ನಾರಾಯಣನಿಗೆ ಅರಶಿಣದ ನೀರಿನಿಂದ ಅಭಿಷೇಕ ಮಾಡಿ. ಪೂಜೆಗೆ ಹಳದಿ ಹೂಗಳನ್ನು ಬಳಕೆ ಮಾಡಿ. ಹಳದಿ ಬಣ್ಣದ ಪದಾರ್ಥಗಳಿಂದ ನೈವೇದ್ಯ ಮಾಡಿ. ಮಹಾವಿಷ್ಣುವಿಗೆ ಅರಶಿಣದ ತಿಲಕವನ್ನಿಟ್ಟು ಮಹಾವಿಷ್ಣುವಿನ ಶ್ಲೋಕಗಳನ್ನು ಹೇಳಿ ಭಕ್ತಿಯಿಂದ ಪೂಜೆ ಮಾಡಿ.
ಓಂ ನಮೋ ಭಗವತೇ ವಾಸುದೇವಾಯ, ಓಂ ನಮೋ ನಾರಾಯಣಾಯ ಇತ್ಯಾದಿ ಶ್ರೀಮನ್ನಾರಾಯಣನ ಮಂತ್ರಗಳನ್ನು ಹೇಳಿ ಜಪ ಮಾಡಿ. ಭಕ್ತಿಯಿಂದ ಈ ರೀತಿ ಪೂಜೆ ಮಾಡುವುದರಿಂದ ನಿಮ್ಮ ಜನ್ಮ ಜನ್ಮಾಂತರದ ಪಾಪ ತೊಳೆದು ಹೋಗಿ, ಶ್ರೀಮನ್ನಾರಾಯಣನ ಶ್ರೀರಕ್ಷೆ ಪಡೆಯುತ್ತೀರಿ.